ಮಾಚುಪಿಚ್ಚು -
ಇಂಕ ಸಾಮ್ರಾಜ್ಯಕ್ಕೆ ಸೇರಿದ ಒಂದು ಸುಸಂರಕ್ಷಿತ ನಗರ; ದಕ್ಷಿಣ ಅಮೇರಿಕದ ಪೆರು ಪ್ರಾಂತ್ಯದಲ್ಲಿಯ ಕೂಸ್ಕೊ ಎಂಬ ಸ್ಥಳಕ್ಕೆ ವಾಯವ್ಯದಲ್ಲಿದೆ. ಕಡಿದಾದ ಪ್ರದೇಶದ ಮೇಲೆ ಸಾವಿರ ಅಡಿಗಳಿಗೂ ಮೀರಿದ ಎತ್ತರ. ಇಲ್ಲಿರುವ ಈ ನಗರ ಬಲುಮಟ್ಟಿಗೆ ದುರ್ಗಮವಾದುದು. ಈ ಕಾರಣದಿಂದಲೇ ಅದು ಸ್ಪ್ಯಾನಿಷ್ ವೃತ್ತಾಂತಕಾರರಿಗೆ ಅಪರಿಚಿತವಾಗುಳಿಯಿತು. 1911ರಲ್ಲಿ ಹಿರಾಮ್ ಬಿಂಘಮ್ ಎಂಬಾತ ಈ ನಗರವನ್ನು ಅನ್ವೇಷಿಸಿದ. ಕಲ್ಲುಕೆತ್ತನೆ ಕೆಲಸದ ಸೊಗಸಾದ ಉದಾಹರಣೆಗಳು ಇಲ್ಲಿ ಕಾಣಸಿಗುತ್ತವೆ. ಇಲ್ಲಿಯ ಕಟ್ಟಡಗಳಲ್ಲಿ ಮನೆ ಕಾಂಪೌಂಡುಗಳು, ದೇವಾಲಯಗಳು, ಗುಡಿಗಳು, ಕಲ್ಲಿನ ನೀರಬೋಗುಣಿಗಳ ಸಂಕೀರ್ಣ ವ್ಯವಸ್ಥೆ ಮುಂತಾದವು ಸೇರಿವೆ. ಈ ಭೂಪ್ರದೇಶದಲ್ಲಿಯ ಅಸಮತೆಯಿಂದಾಗಿ ಸಹಜವಾಗಿಯೇ ಹಲವೆಡೆ ಆವಶ್ಯಕವಾದ ಶಿಲಾ ಸೋಪಾನಗಳೂ ಇವೆ.
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ